ಭೂ ಸಲಿಲ ಶಿಖಿ ಪವನ ಭೂತಾ
ಕಾಶದೊಳಗೈದೈದು ತನ್ಮಾ
ತ್ರಾ ಸಹಿತವೊಂದಧಿಕ ಪಂಚಾಶದ್ವರಣ ವೇದ್ಯ |
ಈ ಶರೀರದಿ ವ್ಯಾಪಿಸಿದ್ದು ಸು
ರಾಸುರರಿಗೆ ನಿರಂತರದಲಿ ಸು
ಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ  || ೧ ||

ಪ್ರಣವ ಪ್ರತಿಪಾದ್ಯ ತ್ರಿನಾಮದಿ
ತನುವಿನೊಳು ತ್ರಿಸ್ಥಾನಗನಿರು
ದ್ಧನು ತ್ರಿಪಂಛಕ ಏಕವಿಂಶತಿ ಚತುರವಿಂಶತಿಗ |
ನೆನಿಸಿ ಎಪ್ಪತ್ತೆರಡು ಸಾವಿರ
ಇನಿತು ನಾಡಿಗಳೊಳು ನಿಯಾಮಿಸು
ತಿನಗಭಸ್ಥಿಗ ಲೋಕದೊಳು ಸರ್ವತ್ರ ಬೆಳಗುವನು  || ೨ ||

ಜೀವ ಲಿಂಗನಿರುದ್ಧ ಸ್ಥೂಲ ಕ
ಳೇವರಗಳಲಿ ವಿಶ್ವ  ತುರಗ
ಗ್ರೀವ ಮೂಲೇಶಾಚ್ಯುತ ತ್ರಯ ಹಂಸಮೂರ್ತಿಗಳ |
ಈ ವಿಧ ಚತುಸ್ಥಾನದಲಿ ಶಾಂ
ತೀವರನ ಈರೆರಡು ರೂಪದಿ
ಭಾವಿಸುವುದೇಕೋನವಿಂಶತಿ ಮೂರ್ತಿ ಸರ್ವತ್ರ  || ೩  ||

ಕಲುಷವಿಲ್ಲದ ದರ್ಪಣದಿ ಪ್ರತಿ
ಫಲಿಸಿ ಸರ್ವ ಪದಾರ್ಥಗಳು ಕಂ
ಗೊಳಿಸುವಂದದಿ ಬಿಂಬ ಜಡ ಚೇತನಗಳೊಳಗಿದ್ದು |
ಪೊಳೆವ ಬಹುರೂಪದಲಿ ಸಜ್ಜನ
ರೊಳಗೆ ಮನ ದರ್ಪಣದಿ ತಾ ನಿ
ಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ  || ೪ ||

ಈ ಶರೀರ ಚತುಷ್ಟಯಗಳೊಳು
ಕೋಶ ಧಾತಗ ಭಾರತೀಪತಿ ಪ್ರಾ
ಣೇಶನಿಪ್ಪತ್ತೊಂದು ಸಾವಿರದಾರು ನೂರೆನಿಪ |
ಶ್ವಾಸ ರೂಪಕ ಹಂಸ ಭಾಸ್ಕರ
ಭೇಶರೊಳಗಿದ್ದವರ ಕೈವಿಡಿ
ದೀ ಸರೋಜ ಭವಾಂಡದೊಳು ಸರ್ವತ್ರ ತುಂಬಿಹನು  || ೫ ||

ಶಿರಗಳೈದೈದೆರಡು ಬಾಹುಗ
ಳೆರಡು ಪಾದಗಳೊಂದು ಮಧ್ಯೋ
ದರದಿ ಶೋಭಿಪ ವಾಜ್ಮನೋಮಯನೆನಿಸಿ ನಿತ್ಯದಲಿ |
ಕರಣ ಧಾಮಗಳಲ್ಲಿ ಎಪ್ಪ
ತ್ತೆರಡು ಸಾವಿರ ನಾಡಿಗಳಲಿ
ಪ್ಪರವಿದೂರನು ಭಾರತ ಪ್ರತಿಪಾದ್ಯನೆಂದೆನಿಸಿ  ||  ೬  ||

ಈರೆರಡು ದೇಹೋರ್ಮಿ ಭೂತಗ
ಳಾರಧಿಕ ದಶ ಋಗ್ವಿನುತಲ
ಕ್ಷ್ಮೀರಮಣ ವಿಷ್ಣ್ವಾಖ್ಯ ರೂಪದಿ ಚತುಃ ಷಷ್ಟಿಕಲಾ |
ಧಾರಕನು ತಾನಾಗಿ ಬ್ರಹ್ಮ ಪು
ರಾರಿ ಮುಖ್ಯರೊಳಿದ್ದು ಸತತ ವಿ
ಹಾರ ಮಾಳ್ಪನು ಚತುಷ್ಪಾದಾಹ್ವಯದಿ ಲೋಕದೊಳು  ||  ೭  ||

ತೃಣ ಮೊದಲು ಬ್ರಹ್ಮಾಂತ ಜೀವರ
ತನು ಚತುಷ್ಟಯಗಳಲಿ ನಾರಾ
ಯಣನ ಸಾವಿರದೈದು ನೂರಿಪ್ಪತ್ತು ಮೇಲಾರು |
ಗಣನೆ ಮಾಳ್ಪುದು ಬುಧರು ರೂಪವ
ಘೃಣಿಯು ಸೂರ್ಯಾದಿತ್ಯ ನಾಮಗ
ಳನುದಿನದಿ ಜಪಿಸುವರಿಗೀವಾರೋಗ್ಯ ಸಂಪದವ  ||  ೮  ||

ಐದು ನೂರೆಪ್ಪತ್ತು ನಾಲಕು
ಆಧಿಭೌತಿಕದಲ್ಲಿ ತಿಳಿವುದು
ಐದೆರಡು ಶತಏಕವಿಂಶತಿ ರೂಪವಧ್ಯಾತ್ಮ  |
ಭೇದಗಳಲಿನ್ನೂರು ಮೂವ
ತ್ತಾದ ಮೇಲೊಂದಧಿಕ ಮೂರ್ತಿಗ
ಳಾದರದಲಧಿ ದೈವದೊಳು ಚಿಂತಿಪುದು ಭೂಸುರರು  ||  ೯  ||

ಸುರುಚಿ ಶಾರ್ವರೀಕರನೆನಿಸಿ ಸಂ
ಕರುಷಣ ಪ್ರದ್ಯುಮ್ನ ಶಶಿ ಭಾ
ಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ |
ಕರೆಸಿಕೊಂಬನು ಅಹಸ್ಸಂವ
ತ್ಸರನೆನಿಪನು ವಿಶಿಷ್ಟ ನಾಮದ
ಲರಿತವರಿಗಾರೋಗ್ಯ ಭಾಗ್ಯವನೀವಾನಂದಮಯ  ||  ೧೦  ||

ಏಕ ಪಂಚಾಶದ್ವರಣಗತ ಮಾ
ಕಳತ್ರನು ಸರ್ವರೊಳಗ
ವ್ಯಾಕೃತಕಾಶಾಂತ ವ್ಯಾಪಿಸಿ ನಿಗಮ ತತಿಗಳನು |
ವ್ಯಾಕರಣ ಭಾರತ ಮುಖಾದ್ಯ
ನೇಕ ಶಾಸ್ತ್ರ ಪುರಾಣ ಭಾಷ್ಯಾ
ನೀಕಗಳ ಕಲ್ಪಿಸಿ ಮನೋವಾಜ್ಮಯನೆನಿಸಿಕೊಂಬ  ||  ೧೧  ||

ಭಾರಭೃನ್ನಾಮಕನ ಸಾವಿರ
ದಾರು ನೂರಿಪ್ಪತ್ತು ನಾಲುಕು
ಮೂರ್ತಿಗಳು ಚರಾಚರದಿ ಸರ್ವತ್ರ ತುಂಬಿಹವು |
ಆರು ನಾಲ್ಕು ಜಡಗಳಲ್ಲಿ ಹದಿ
ನಾರು ಚೇತನಗಳಲಿ ಚಿಂತಿಸೆ
ತೋರಿಕೊಂಬನು ತನ್ನ ರೂಪವ ಸರ್ವಠಾವಿನಲಿ  ||  ೧೨  ||

ಮಿಸುನಿಯ ಮೇಲಿನ ಮಣಿಯವೋಲ್ ರಾ
ಜಿಸುವ ಬ್ರಹ್ಮಾದಿಗಳ ಮನದಲಿ
ಬಿಸಜಜಾಂಡಾಧಾರಕನು ಆಧೇಯನೆಂದೆನಿಸಿ |
ದ್ವಿಶತ ನಾಲ್ವತ್ತೆರಡು ರೂಪದಿ
ಶಶಿಯೊಳಿಪ್ಪನು ಶಶದೊಳಗೆ ಶೋ
ಭಿಸುವ ನಾಲ್ವತ್ತೆರಡಧಿಕ ಶತರೂಪದಲಿ ಬಿಡದೆ  ||  ೧೩  ||

ಎರಡು ಸಾವಿರದೆಂಟು ರೂಪವ
ನರಿತು ಸರ್ವ ಪದಾರ್ಥದಲ್ಲಿ ಸಿರಿ
ವರನ ಪೂಜೆಯ ಮಾಡು ವರಗಳ ಬೇಡು ಕೊಂಡಾಡು |
ಬರಿದೆ ಜಲದಲಿ ಮುಣುಗಿ ಬಿಸಿಲೊಳು
ಬೆರಳನೆಣಿಸಿದರೇನು ಸದ್ಗುರು
ಹಿರಿಯರನುಸರಿಸಿರದೆ ಮರ್ಮವನರಿಯದಿಹ ನರನು  ||  ೧೪  ||

ಮತ್ತೆ ಚಿದ್ದೇಹದ ಒಳಗೆ ಎಂ
ಭತ್ತು ಸಾವಿರದೇಳು ನೂರಿ
ಪ್ಪತ್ತೈದು ನೃಸಿಂಹ ರೂಪದಲ್ಲಿದ್ದು ಜೀವರಿಗೆ |
ನಿತ್ಯದಲಿ ಹರಲಿರುಳು ಬಪ್ಪಪ
ಮೃತ್ಯುವಿಗೆ ತಾ ಮೃತ್ಯುವೆನಿಸುವ
ಭೃತ್ಯ ವತ್ಸಲ ಭಯ ವಿನಾಶನ ಭಾಗ್ಯ ಸಂಪನ್ನ  ||  ೧೫  ||

ವರನೊಳಿಪ್ಪತ್ತೇಳು ಹರನೊಳ
ಗಿರುವ ಇಪ್ಪತ್ತೆಂಟು ರೂಪದಿ
ಎರಡು ಸಾವಿರದೆಂಟು  ನೂರಿಪ್ಪತ್ತರೇಳೆನಿಪ |
ಜ್ವರಹರಾಹ್ವಯ ನಾರಸಿಂಹನ
ಸ್ಮರಣೆ ಮಾತ್ರದಿ ದುರಿತರಾಶಿಗ
ಳಿರದೆ ಪೋಪವು ತರಣಿಬಿಂಬವ ಕಂಡ ಹಿಮದಂತೆ  ||  ೧೬  ||

ಮಾಸ ಪರಿಯಂತರವು ಬಿಡದೆ ನೃ
ಕೇಸರಿಯ ಶುಭನಾಮ ಮಂತ್ರ ಜಿ
ತಾಸನದ ಲೇಕಾಗ್ರ ಚಿತ್ತದಿ ನಿಷ್ಕಪಟದಿಂದ |
ಬೇಸರದೆ ಜಪಿಸಲು ವೃಜಿನಗಳ
ನಾಶಗೈಸಿ ಮನೋರಥಗಳ ಪ
ರೇಶ ಪೂರ್ತಿಯ ಮಾಡಿಕೊಡುವನು ಕಡೆಗೆ ಪರಗತಿಯ  ||  ೧೭  ||

ಚತುರ್ಮೂರ್ತ್ಯಾತ್ಮಕ ಹರಿಯು ತ್ರಿಂ
ಶತಿ ಸ್ವರೂಪದಿ ಬ್ರಹ್ಂನೊಳು ಮಾ
ರುತನೊಳಿಪ್ಪತ್ತೇಳು ರೂಪದೊಳಿಪ್ಪ  ಪ್ರದ್ಯುಮ್ನ |
ಸುತರೊಳಿಪ್ಪತ್ತೈದು ಹದಿನೆಂ
ಟತುಳ ರೂಪಗಳಾಂತು ವತ್ಸರ
ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದುವ  ||  ೧೮  ||

ನೂರು ವರುಷಕೆ ದಿವಸ ಮೂವ
ತ್ತಾರ ಸಾವಿರವಹವು ನಾಡಿ ಶ
ರೀರದೊಳಗಿನಿತಿಹವು  ಸ್ತ್ರೀಪುಂ ಭೇದದೈ ಹರಿಯ |
ಈರಧಿಕ ಎಪ್ಪತ್ತು ಸಾವಿರ
ಮೂರುತಿಗಳ ನೆನೆದು ಸರ್ವಾ
ಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು  ||  ೧೯  ||

ಕಾಲಕರ್ಮ ಗುಣ ಸ್ವಭಾವಗ
ಳಾಲಯನು ತಾನಾಗಿ ಲಕುಮೀ
ಲೋಲ ತತ್ತದ್ರೂಪ ನಾಮದಿ ಕರೆಸುತೊಳಗಿದ್ದು |
ಲೀಲೆಯಿಂದಲಿ ಸರ್ವ ಜೀವರ
ಪಾಲಿಸುವ ಸಂಹರಿಸಿ ಸೃಷ್ಟಿಪ
ಮೂಲಕಾರಣ ಪ್ರಕೃತಿ ಗುಣ ಕಾರ್ಯಗಳೆ ಮನೆ ಮಾಡಿ  ||  ೨೦  ||

ತಿಲಜವರ್ತಿಗಳನುಸರಿಸಿ ಪ್ರ
ಜ್ವಲಿಸಿ ದೀಪಗಳಾಲಯದ ಕ
ತ್ತಲೆಯ ಭಂಗಿಸಿ ತದ್ಗತ ಪದಾರ್ಥವತೋರುವಂದದಲಿ |
ಜಲರುಹೇಕ್ಷಣ ತನ್ನವರ ಮನ
ದೊಳಗೆ ಭಕ್ತಿ ಜ್ಞಾನ ಕರ್ಮಕೆ
ಒಲಿದು ಪೊಳೆವುತ ತೋರುವನು ಗುಣ ರೂಪಕ್ತಿಯೆಗಳನು  ||  ೨೧  ||

ಆವ ದೇಹವ ಕೊಡಲಿ ಹರಿ ಮ
ತ್ತಾವ ಲೋಕದೊಳಿಡಲಿ ತಾಮ
ತ್ತಾವ ದೇಶದೊಳಿರಲಿ ಆವಾವಸ್ಥೆಗಳು ಬರಲಿ |
ಈ ವಿಧದ ಜಡ ಚೇತನರೊಳು ಪ
ರಾವರೇಶನ ರೂಪ ಗುಣಗಳ
ಭಾವಿಸುತ ಸುಜ್ಞಾನ ಭಕುತಿಯ ಬೇಡು ಕೊಂಡಾಡು  ||  ೨೨  ||

ಒಂದರೊಳಗೊಂದೊಂದು ಬೆರೆದಿಹ
ಇಂದಿರೇಶನ ರೂಪಗಳ ಮನ
ಬಂದ ತೆರದಲಿ ಚಿಂತಿಸಿದಕನುಮಾನವಿನಿತಿಲ್ಲ |
ಸಿಂಧು ರಾಜನೊಳಂಬರಾಲಯ
ಬಂಧಿಸಲು ಪ್ರತಿತಂತುಗಳೊಳುದ
ಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ  ||  ೨೩  ||

ಒಂದು ರೂಪದೊಳೊಂದಾಯದೊ
ಳೊಂದು ರೂಪದೊಳೊಂದು ದೇಶದಿ
ಪೊಂದಿಯಿಪ್ಪವಜಾಂಡನಂತಾನಂತ ಕೋಟಿಗಳು |
ಹಿಂದೆ ಮಾರ್ಕಾಂಡೇಯ ಕಾಣನೆ
ಒಂದು ರೂಪದಿ ಸೃಷ್ಟಿ  ಪ್ರಳಯವ
ಇಂದಿರೇಶನೊಳೇನಿದಚ್ಚರಿ ಅಪ್ರಮೇಯ ಸದಾ  ||  ೨೪  ||

ಒಂದನಂತಾನಂತ ರೂಪಗಳ
ಳೊಂದು ರೂಪದಿಯಿಹವು ಲೋಕಗ
ಳೊಂದೆ ರೂಪದಿ ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ |
ಒಂದೆ ಕಾಲದಿ ಮಾಡಿ ತಿಳಿಸದೆ
ಸಂದಣಿಸಿಕೊಂಡಿಪ್ಪ ಜಗದೊಳು
ನಂದ ನಂದನ ಅಣದೊಳಿಂದ್ರಾತ್ಮಜಗೆ ತೋರಿಸನೆ  ||  ೨೫  ||

ಶ್ರೀ ರಮೇಶನ ಮೂರ್ತಿಗಳು ನವ
ನಾರಿ ಕುಂಜರದಂತೆಯೇಕಾ
ಕಾರ ತೋರ್ಪವು ಅವಯವಾಹ್ವಯ ಅವಯವಗಳಲ್ಲಿ |
ಬೇರೆ ಬೇರೆ ಕಂಗೊಳಿಸುವ ಶ
ರೀರದೊಳು ನಾನಾ ಪ್ರಕಾರ ವಿ
ಕಾರ ಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು  ||  ೨೬  ||

ವಾರಿಜಭವಾಂಡದೊಳು ಲಕುಮೀ
ನಾರಸಿಂಹನ ರೂಪಗುಣಗಳು
ವಾರಿಧಿಯೊಳಿಹ ತೆರೆಗಳಂದದಿ ಸಂದಣಿಸಿ ಇಹವು |
ಕಾರಣಾಂಶಾವೇಶ ವ್ಯಾಪ್ತವ
ತಾರ ಕಾರ್ಯ ವ್ಯಕ್ತಾವ್ಯಕ್ತವು
ಆರು ನಾಲ್ಕು ವಿಭೂತಿಯಂತರ್ಯಾಮಿ ರೂಪಗಳು  ||  ೨೭  ||

ಮಣಿಗಳೊಳಗಿಹ ಸೂತ್ರದಂದದಿ
ಪ್ರಣವಪಾದ್ಯನು ಚೇತನಾಚೇ
ತನ ಜಗತ್ತಿನೊಳನುದಿನದಲಾಡುವನು ಸುಖಪೂರ್ಣ |
ದಣಿವಿಕೆಯು ಇವಗಿಲ್ಲ ಬಹುಕಾ
ರುಣಿಕನಂತಾನಂತ ಜೀವರ
ಗಣದೊಳೇಕಾಂಶಾಂಶ ರೂಪದಿ ನಿಂತು ನೇಮಿಸುವ  ||  ೨೮  ||

ಜೀವ ಜೀವರ ಭೇದ ಜಡ ಜಡ
ಜೀವ ಜಡ ಜಡ ಜೀವರಿಂದಲಿ
ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು ಲಕ್ಷ್ಮೀ |
ಮೂವರಿಂದಲಿ ಪದುಮಜಾಂಡದಿ
ತಾ ವಿಲಕ್ಷಣಳೆನಿಸುತಿಪ್ಪಳು
ಸಾವಧಿಕ ಸಮಶನ್ಯಳೆಂದರಿತೀರ್ವರನು ಭಜಿಸು  || ೨೯  ||

ಆದಿತೇಯರು ತಿಳಿಯದಿಹ ಗುಣ
ವೇದ ಮಾನಿಗಳೆಂದೆನಿಪ ವಾ
ಣ್ಯಾದಿಗಳು ಬಲ್ಲರವರರಿಯದ ಗುಣಗಣಂಗಳನು |
ವೇಧಬಲ್ಲನು ಬೊಮ್ಮನರಿಯದ
ಗಾಧ ಗುಣಗಳು ಲಕುಮಿ ಬಲ್ಲಳು
ಶ್ರೀಧರೊಬ್ಬನುಪಾಸ್ಯ ಸದ್ಗುಣ ಪೂರ್ಣ ಹರಿಯೆಂದು  ||  ೩೦  ||

ಇಂತನಂತಾನಂತ ಗುಣಗಳ
ಪ್ರಾಂತಗಾಣದೆ ಮಹಲಕುಮಿ ಭಗ
ವಂತಗಾಭರಣಾಯುಧಾಂಬರವಾಲಯಗಳಾಗಿ |
ಸ್ವಾಂತದಲಿ ನೆಲೆಗೊಳಿಸಿ ಪರಮ ದು
ರಂತ ಮಹಿಮನ ದೌತ್ಯ ಕರ್ಮನಿ
ರಂತರದಿ ಮಾಡುತಲಿ ತದಧೀನತ್ವವೈದಿಹಳು  ||  ೩೧  ||

ಪ್ರಳಯ ಜಲಧಿಯೊಳುಳ್ಳ ನಾವೆಯ
ಹೊಲಬುಗಾಣದೆ ಸುತ್ತುವಂದದಿ
ಜಲರುಹೇಕ್ಷಣನಮಲ ಗುಣ ರೂಪಗಳ ಚಿಂತಿಸುವ |
ನೆಲೆಯಗಾಣದೆ ಮಹಲಕುಮಿ ಛಂ
ಛಲವನೈದಿಹಳಲ್ಪ ಜೀವರಿ
ಗಳವಡುವುದೇನಿವನ ಮಹಿಮೆಗಳೀ ಜಗತ್ರಯದಿ  ||  ೩೨  ||

ಶ್ರೀನಿಕೇತನ ಸಾತ್ವತಾಂಪತಿ
ಜ್ಞಾನಗಮ್ಯಗಯಾಸುರಾರ್ದನ
ಮೌನಿ ಕುಲ ಸನ್ಮಾನ್ಯ ಮಾನದ ಮಾತುಳ ಧ್ವಂಸಿ |
ದೀನಜನ ಮಂದಾರ ಮಧುರಿಪು
ಪ್ರಾಣದ ಜಗನ್ನಾಥ ವಿಠಲ
ತಾನೆ ಗತಿಯೆಂದನುದಿನದಿ ನಂಬಿದವರನು ಪೊರೆವ  ||  ೩೩  ||